ಹೇಮಾದ್ರಿ
	ಸೇವುಣ ದೊರೆ ಮಹಾದೇವನ (1260-71) ಮುಖ್ಯಕಾರ್ಯದರ್ಶಿ ಮತ್ತು ಆಸ್ಥಾನವಿದ್ವಾಂಸ. ಇವನ ತಾತ ವಾಸುದೇವ, ತಂದೆ ಕಾಮದೇವ. ಪಾಂಡಿತ್ಯಕ್ಕೆ  ಪ್ರಸಿದ್ಧನಾಗಿದ್ದ ಈತ ಅನೇಕ ಗ್ರಂಥಗಳನ್ನು ರಚಿಸಿದ್ದಾನೆ. ವ್ರಾತಖಂಡ ಇವನ ಪ್ರಥಮ ಕೃತಿ. ಚತುರ್ವರ್ಣಚಿಂತಾಮಣಿ, ಕಾಲನಿರ್ಣಯ, ತಿಥಿನಿರ್ಣಯ, ಪರ್ಜನ್ಯ ಪ್ರಯೋಗ, ದಾನವಾಕ್ಯಾವಳಿ, ಆಯುರ್ವೇದ ರಸಾಯನ ಮೊದಲಾದವು ಇವನಿಂದ ರಚಿತವಾದ ಇತರ ಗ್ರಂಥಗಳು. ವ್ರಾತಖಂಡದಲ್ಲಿ ಸೇವುಣರ ಪ್ರಾರಂಭದ ಇತಿಹಾಸಕ್ಕೆ ಸಂಬಂಧಿಸಿದ ಅನೇಕ ಉಪಯುಕ್ತ ಘಟನೆಗಳನ್ನೂ ತನ್ನ ಪೋಷಕನಾದ ಮಹಾದೇವನ ಯುದ್ಧವಿಜಯಗ ಳನ್ನೂ ವರ್ಣಿಸಿದ್ದಾನೆ. ಮಹಾದೇವ ಗುಜರಾತಿನ ವಾಘೇಲರನ್ನೂ ಮಾಳವದ ಪರಮಾರರನ್ನೂ ತೆಲಂಗಾಣದ ಕಾಕತೀಯರನ್ನೂ ಸೋಲಿಸಿದುದಾಗಿ ಇವನ ವರ್ಣನೆಗಳಿಂದ ತಿಳಿದುಬರುತ್ತದೆ.

 	ಈತನ ಗ್ರಂಥಗಳಲ್ಲಿ ಚತುರ್ವರ್ಣಚಿಂತಾಮಣಿ ಅತ್ಯಂತ ಪ್ರಸಿದ್ಧವಾ ದುದು. ಈ ಗ್ರಂಥ ಮತೀಯ ನಿಯಮಗಳಿಗೆ ಸಂಬಂಧಿಸಿದ ವ್ರತಖಂಡ, ದಾನಖಂಡ, ತೀರ್ಥಖಂಡ, ಮೋಕ್ಷಖಂಡ ಮತ್ತು ಪರಿಶಿಷ್ಟಖಂಡ ಎಂಬ ಭಾಗಗಳಿಂದ ಕೂಡಿದೆ. ಈತ ಮರಾಠಿ ಭಾಷೆಯಲ್ಲಿ ಮೋಡಿ ಲಿಪಿಯನ್ನು ಆಚರಣೆಗೆ ತಂದ. ಹೇಮದ್ ಪಂತ್ ಎಂಬ ಶೈಲಿಯ ಅನೇಕ ದೇವಾಲಯಗಳನ್ನು ಈತ ನಿರ್ಮಿಸಿದನೆಂದೂ ಇವನಿಗೆ ಹೇಮದ್ ಪಂತ್ ಎಂಬ ಹೆಸರೂ ಪ್ರಚಲಿತವಿತ್ತೆಂದೂ ತಿಳಿದುಬರುತ್ತದೆ.		
(ಜಿ.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ